Monday, February 25, 2008

ಗಾಂಧಿ ಜಯಂತಿ ಮತ್ತು ಗಾಂಧಿ


ಗಾಂಧಿ ಇಂದಿಗೂ ಪ್ರಸ್ತುತ ಎನ್ನುವ ಮಾತಿದೆ.ಆದರೆ ಇತ್ತೀಚಿನ ಘಟನೆಗಳು ಇದಕ್ಕೆ ವ್ಯತಿರಿಕ್ತ ಅನ್ನಿಸುತ್ತದೆ.ಇದಕ್ಕೆ ಪೂರಕವಾಗಿ ನಿಂತದ್ದು ಮೊನ್ನೆ ನಡೆದ ಗಾಂಧಿ ಜಯಂತಿ ನಾಟಕ ಪ್ರದರ್ಶನ.ವಾಸ್ತವತೆಗೆ ಕನ್ನಡಿ ಹಿಡಿದ ನಾಟಕವನ್ನು ತೆಲುಗಿನಿಂದ ಕನ್ನಡಕ್ಕೆ ತರಲಾಗಿದೆ.ಗಾಂಧಿ,ಸ್ವಾತಂತ್ರ್ಯ ನಂತರದ ಭಾರತವನ್ನು ಕಂಡು ಆತಂಕಗೊಳ್ಳುವುದೇ ನಾಟಕದ ಕಥಾ ವಸ್ತು.

ಪ್ರಾರಂಭ


ಭಾರತಕ್ಕೆ ಗಾಂಧಿ ಸ್ವಾತಂತ್ರ್ಯ ತಂದುಕೊಟ್ಟು ತಪ್ಪು ಮಾಡಿದರು.ಇದು ಮಹಾಪಾಪ,ಇದು ಯಮಲೋಕದಲ್ಲಿರುವ ಅಪಾದನೆ.ಚಿತ್ರಗುಪ್ತನ ಆರೋಪ.ಇದಕ್ಕಾಗಿ ಗಾಂಧೀಜಿಗೆ ಶಿಕ್ಷೆ ಕೂಡಾ ಪ್ರಾಪ್ತಿಯಾಗುತ್ತದೆ. ಮತ್ತೆ ಭೂಲೋಕದಲ್ಲಿ 1 ತಿಂಗಳ ಕಾಲ ಮಹಾತ್ಮ ಭೂಲೋಕದಲ್ಲಿ ಜೀವಿಸಬೇಕು. ಹೀಗೆ ಭೂಲೋಕದಲ್ಲಿ ಕಾಣಿಸಿಕೊಳ್ಳುವ ಗಾಂಧೀಜಿಯನ್ನು ಗಾಂಧಿ ಎಂದು ಒಪ್ಪಿಕೊಳ್ಳಲು ಯಾರು ಸಿದ್ಧರಿಲ್ಲ. ಹೀಗೆ ಮನುಜನ ಕರ್ಮಭೂಮಿಯು ಅನಾವರಣಗೊಳ್ಳುತ್ತ ಸಾಗುತ್ತದೆ.ರಾಜಕಾರಣಿಗಳ ಬೂಟಾಟಿಕೆ, ವಿಧಾನಸಭೆಯಲ್ಲಿ ಜನಪ್ರತಿನಿಧಿಗಳ ನಾಟಕ ಎಲ್ಲವೂ ಬಟ್ಟೆ ಕಳಚಿಕೊಳ್ಳುತ್ತದೆ.
ಅದೊಂದು ಚುನಾವಣೆಯ ಸಂದರ್ಭ ಗಾಂಧಿಯ ಬಳಿಗೆ ಬಂದ ಮತ ಭಿಕ್ಷುಕರು ಮತಕ್ಕಾಗಿ ತಟ್ಟೆ ಹಿಡಿಯುತ್ತಾರೆ.ಅವೆರೆಲ್ಲಾ ಹಿಂತಿರುಗಿದ ಬಳಿಕ ಗಾಂಧಿ ಪ್ರಶ್ನೆಯೊಂದನ್ನು ಕೇಳುತ್ತಾರೆ. 'ನನ್ನ ಹೆಸರೂ ಮತದಾರರ ಪಟ್ಟಿಯಲ್ಲಿ ಇದೆಯಾ.?' ಇದೊಂದು ಮಾತು ಸಾಕು ವಾಸ್ತವದ ನೆರಳಿಗೆ.ಮೊನ್ನೆ ಮೊನ್ನೆ ಚುನಾವಣಾ ಆಯೋಗ ನಡೆಸಿತಲ್ಲ ಮತದಾರರ ಪಟ್ಟಿ ಪರಿಷ್ಕರಣ ಯಾಗ ಇದು ನನ್ನ ಮನಸ್ಸಿನಲ್ಲಿ ತೇಲಿ ಹೋಯಿತು.
ಮುಖ್ಯವಾಗಿ ಹೊಲಸು ರಾಜಕೀಯದ ಬಗ್ಗೆಯೇ ನಾಟಕ ಬೆಳಕು ಚೆಲ್ಲುತ್ತದೆ. ಕಮಿಷನ್ ವ್ಯವಹಾರ, ಮತದಾನ ಅವ್ಯವಹಾರ ,
ಬಜೆಟ್ ಗಾರಿಕೆ ಹೀಗೆ ಬೆಳಕಿನ ಚೆಲ್ಲುತ್ತದೆ.ಕೊನೆಯಲ್ಲಿ ಎಲ್ಲಾ ಘಟನೆಗಳಿಗೂ ಗಾಂಧೀಜಿ ನಿರುತ್ತರರಾಗುತ್ತಾರೆ. ಚಿತ್ರಗುಪ್ತನ ಮಾತು ಅವರ ಕಿವಿಗೆ ಅಪ್ಪಳಿಸುತ್ತದೆ. ಒಟ್ಟಾರೆ ಈ ನಾಟಕ ನನಗೆ ತುಂಬಾ ಇಷ್ಟವಾಯಿತು. ಬೆಳಕು, ನಟನೆ ಇವೆಲ್ಲಾ ಹೊರತುಪಡಿಸಿ ಒಳಗಿನ ಹೂರಣವಿದೆಯಲ್ಲಾ ಅದು ಖುಷಿ ತಂದುಕೊಟ್ಟಿತು. ತುಂಬಾ ದಿನದ ನಂತರ ರವೀಂದ್ರ ಕಲಾಕ್ಷೇತ್ರ ಮನಸ್ಸಿಗೆ ಮುದ ನೀಡಿತು. ನನ್ನ ಸಂತೋಷವನ್ನು ಹಂಚಿಕೊಂಡಿದ್ದೇನೆ.

Wednesday, February 13, 2008

ಮತ್ತೊಂದು ಕನಸು

ನಿನ್ನ ಅಂಗೈಯಲ್ಲಿ ನನ್ನ ಅಂಗೈ ಬಂಧಿಯಾಗಿ
ನಾವಿಬ್ಬರೂ ಓಡಬೇಕು
ಸಮುದ್ರದಂಡೆಯಲಿ
ಮರಳರಾಶಿಯ ತುಂಬಾ ನಮ್ಮದೇ ಪಾದದ ಗುರುತು
ಮುತ್ತಿಕ್ಕುವ ಅಲೆಗೇನೂ ಗೊತ್ತು
ನಮ್ಮ ಓಟದ ಗುರಿ

ಸೊರ್ಯ ಮುಳುಗುವ ಹೊತ್ತಿಗೆ
ನೀರು ಚುಂಬಿಸುವಷ್ಟರಲ್ಲಿ
ನಾನು ನಿನ್ನೊಳಗೆ ಬಂಧಿಯಾಗಬೇಕು
ಓಟ ಮುಗಿದಿರಬೇಕು,
ನಿನ್ನ ನಾಚಿಕೆ ರಂಗೇರಬೇಕು
ಸೂರ್ಯನ ಕೆಂಪಿನಂತೆ

ನಿನ್ನ ಎದೆಯೊಳಗೆ ನಾನು ಉರಿಯಬೇಕು
ಹಣತೆಯಂತೆ ಹುಣ್ಣೆಮೆಯ ಚಂದಿರನಂತೆ
ನನ್ನೊಳಗೆ ನೀನು ಉರಿಯಬೇಕು
ನನ್ನಂತೆ..........


( ನಾಳೆ ಪ್ರೀತಿಯ ದಿನ, ಹಲವು ತಿಂಗಳುಗಳ ಹಿಂದೆ ಬರೆದ ಕವನ ಇಲ್ಲಿದೆ...)

ಮತ್ತೆ ಕನಸುಗಳ ಮೋಡ ಕಟ್ಟಿದ್ದೇನೆ. ಪ್ರೀತಿಯ ಮಳೆ ಸುರಿಯುತ್ತದೆ.


ಕ್ಷಮೆ ಇರಲಿ.......

ನನ್ನ ಕೆಲಸದ ಒತ್ತಡದ ನಡುವೆ ನಾನು ಎಲ್ಲೋ ಕಳೆದು ಹೋಗುತ್ತಿದ್ದೇನೆ ಎಂದು ಅನಿಸುತಿತ್ತು.ಶ್ರೀ ,ನಿಧಿಯ ಒತ್ತಡ ಬೇರೆ ನಿನಗೆ ಬರೆಯಲು ಏನಾಗಿದೆ ಎಂದು.ನನಗೂ ಹಾಗೆ ಅನ್ನಿಸಿತ್ತು. ಮೊನ್ನೆ ಚಿತ್ರಛಾಪ ಪುಸ್ತಹ ಬಿಡುಗಡೆಗೆ ಹೋಗಿದ್ದೆ. ಎಷ್ಟೊಂದು ಜನ ಬ್ಲಾಗರ್ ಗಳು ಅಲ್ಲಿದ್ದರು. ನಮ್ಮೂರಿನ ಕಾರ್ಯಕ್ರಮ ಅನ್ನಿಸಿತು. ಅವತ್ತೆ ತೀರ್ಮಾನಿಸಿದ್ದೆ ಮತ್ತೆ ಮೋಡ ಕಟ್ಟಬೇಕು ಎಂದು. ಮತ್ತೆ ಬಂದಿದ್ದೆನೆ. ಕನಸುಗಳಿದೆ, ನೋವಿದೆ..........ನಲಿವಿದೆ ಓದಿ ದಯವಿಟ್ಟು ಪ್ರತಿಕ್ರಿಯಿಸಿ..

ಹೊಸ ಕನಸಿನ ಚಿತ್ರವೊಂದಿದೆ...ಸಾಂಕೇತಿಕವಷ್ಟೆ