Saturday, July 21, 2007

ನಿರೀಕ್ಷೆಗಳೇ ಹೀಗೆ

ಮದರಂಗಿ ಹಚ್ಚುತ್ತಾಳೆ ಹುಡುಗಿ
ಪ್ರೀತಿ ಕಟ್ಟುತ್ತಾಳೆ
ಅಂಗೈಯಲ್ಲಿ ಚಿತ್ತಾರ
ಕನಸಿನದ್ದೆ ರೇಖೆ
ಅಂಗೈಯಲ್ಲಿ ಜಾಗವಿಲ್ಲ
ದೂರದ ದಾರಿಗೆ ಕೊನೆಯಿಲ್ಲ
ದೃಷ್ಟಿ ಸಾಗುತ್ತಿದೆ - ಸಾಗುತ್ತದೆ
ಅಂಗೈಯಲ್ಲಿ ಮೊಡಿದ ಚಿತ್ತಾರ ನೋಡುವ ಬಯಕೆ.


ಮನಸ್ಸಿನಲ್ಲಿ ಸಾವಿರ ಚಿತ್ತಾರ
ಅದೆಷ್ಟೋ ನಿರೀಕ್ಷೆಗಳು
ದಿನಾ ಇದೇ ಪಾಡು
ನಿರೀಕ್ಷೆಗಳನ್ನು ಹೊತ್ತು ಸಾಗುವುದು

ಮದರಂಗಿ ಕೆಂಪೇರುತ್ತಿದೆ
ನಿರೀಕ್ಷೆಗಳು ಮಾತ್ರ ಕೆಂಪೇರಿಲ್ಲ
ಮಧ್ಯರಾತ್ರಿ ಕಳೆದರೂ
ಕನಸು ಬಂಡಿ ಹೂಡಿಲ್ಲ - ಕಣ್ಣ ರೆಪ್ಪೆ ಮುಚ್ಚಿಲ್ಲ
ದಾರಿಯಲ್ಲಿಲ್ಲೊಂದು ನೆರಳು ಕಾಣದೆ
ಕನಸು ಕಾಣುವುದಾದರೂ ಹೇಗೆ

Friday, July 20, 2007

ತುಂಬಾ ದಿನದ ಬಳಿಕ ಬರೆಯುತ್ತಿದ್ದೇನೆ. ಸಮಯವಿರಲಿಲ್ಲ.
ಮೊನ್ನೆ ಒಬ್ಬ ವ್ಯಕ್ತಿಯ ಬಗ್ಗೆ ಬರೆಯಬೇಕು ಎಂದು ಯಾರೋ ಹೇಳಿದಾಗ ನಾನೇ ಬರೆದ ಸಾಲುಗಳು ಇಲ್ಲಿವೆ.


ಆತ ನಿಂತೇ ಇದ್ದ ಮುಂದೆ ದೃಷ್ಟಿ ಹಾಯಿಸಿದಷ್ಟೂ ಜಲರಾಶಿ. ಅದರ ಭೋರ್ಗರೆತ. ಮತ್ತೆ ಮತ್ತೆ ಮೊರೆತ.ಇಳಿ ಹೊತ್ತು ಹತ್ತಿರ ಹತ್ತಿರವಾಗುತ್ತಿದ್ದಂತೆ ಅಬ್ಬರದ ಅಬ್ಬರ.
ಆ ನೀಲಿ ಸಾಗರಕ್ಕೆ ಅದೇನೂ ಸಿಟ್ಟೋ, ಅದೇನೂ ಅಕ್ರೋಶವೋ, ಅದೇನು ಆಕ್ರಂದನವೋ, ಒಟ್ಟಿನಲ್ಲಿ ನಿರಂತರ ಭೋರ್ಗರೆತ.ಆತ ನಿಂತೇ ಇದ್ದ, ವ್ಯವಸ್ಥೆಯ ಅವ್ಯವಸ್ಥೆಗೆ, ಮೋಸ - ವಂಚೆನೆಗೆ, ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಎಲ್ಲದಕ್ಕೂ ತಲೆ ಕೆಡಿಸಿಕೊಳ್ಳದಂತೆ ಭೂಮಿಯೆಡೆಗೆ ಬೆನ್ನು ಹಾಕಿ ಸಾಗರದೆಡೆಗೆ ಮುಖ ಮಾಡಿ ಆತ ನಿಂತೇ ಇದ್ದ.
ಅತ್ತ ಸಾಗರ ಈ‍ತನನ್ನು ಛೇಡಿಸುತ್ತಿದೆ ಅಂತಾ ಅನ್ನಿಸಿದರೂ ಸಾಗರಕ್ಕೆ ಸಾಗರವೇ ಅಬ್ಬರಿಸುತ್ತಿದ್ದರೂ ಅವ್ಯವಸ್ಥೆಯನ್ನು ಸರಿಪಡಿಸಲು ಏನು ಮಾಡಲಾಗುತ್ತಿಲ್ಲ ಇನ್ನು ನಾನೇನು ಅಂತ ನಿಂತೆ ಇದ್ದ. ಜಲರಾಶಿಯ ಮುಂದೆ ಒಂಟಿಯಾಗಿ ನಿಂತಿದ್ದ. ಆತ ಯಾರು ಹೇಳಿ. ನನ್ನ ಮನಸ್ಸಿಗೆ ಗೊತ್ತಿಲ್ಲ. ನಿಮಗೆ.
ಅವನೊಳಗಡೆ ನೋವಿದೆ, ನಗುವಿದೆ, ಸಂತೋಷವಿದೆ.ಮನಸ್ಸಿನಲ್ಲಿ ಕಟ್ಟಿಟ್ಟ ಕನಸಿನ ಗೂಡು ಒಡೆದು ಮತ್ತೆ ಸೇರಿಸಿ ಮತ್ತೆ ಒಡೆದು. ಹೀಗೆ ನೋವು ಸಂತೋಷಗಳ ಬುತ್ತಿ ಅವನ ಬಳಿ ಇದೆ.

ರಾಧಾಕೃಷ್ಣ ಆನೆಗುಂಡಿ