Sunday, May 3, 2009

ಒಂದಿಷ್ಟೆ ಹೊತ್ತು

ಕತ್ತಲಾಗಿದೆ ಜಗತ್ತು
ಬೆತ್ತಲಾಗಿದೆ ಮನಸ್ಸು
ಮೈ ಮನ ಆವರಿಸಿದೆ ಮುನಿಸು
ನಕ್ಷತ್ರದ ಸುತ್ತ ಕಪ್ಪು ಚುಕ್ಕೆ
ಮಲ್ಲಿಗೆ ಕಂಪಿನಲ್ಲೂ
ಬೆವರ ಪರಿಮಳ ಆವರಿಸಿದೆ

ಕನಸುಗಳಿಗೆ ಮೊರ್ತ ಸ್ವರೂಪ
ಬದುಕಿನಲ್ಲಿ ಸಂಭ್ರಮದ ಕ್ಷಣ
ಕೆಲವೇ ಹೊತ್ತು ಮಲ್ಲಿಗೆ ಅರಳಿದೆ
ಮತ್ತೆ ಮೊಗ್ಗು ಕಟ್ಟುವ ಆಶೆ

ಮಲ್ಲಿಗೆ ಪರಿಮಳ ಬೆವತಿದೆ
ಪರಿಮಳ ಹೀರಬೇಕು

ಕೂದಲ ಬೇರಲ್ಲಿ ಕಂಪನ
ಕನಸಿನ ಮೋಡ ಮಳೆಯಾಗಿದೆ

ಬೆಳಕು ಹರಿವ ಹೊತ್ತಿಗೆ ನಿರಾಳ
ಮೈ ಮನದ ಸುತ್ತ ಮಲ್ಲಿಗೆಯದ್ದೆ ಘಮ ಘಮ

Saturday, April 18, 2009

ಬದುಕು

ಶರಣಾಗುತ್ತೇನೆ ಗೆಳತಿ
ನಿನ್ನ ಪಾದ ತಳದಲ್ಲಿ
ಬಿರು ಬಿಸಿಲಲ್ಲಿ ತಂಗಾಳಿಯಾಗುತ್ತೇನೆ
ಅಮಾವಸೆ ಕತ್ತಲಲ್ಲಿ
ಮಿಂಚು ಹುಳವಾಗುತ್ತೇನೆ
ಆದರೆ
ಮಳೆ ಬಂದಾಗ ಮರವಾಗಲಾರೆ
ನಿನ್ನ ಕಣ್ಣಂಚಿನಲ್ಲಿ ಕಣ್ಣೀರಾಗುವ
ಬದಲು
ನಿನ್ನ ಉಸಿರಾಗುತ್ತೇನೆ

ಇಷ್ಟೆಲ್ಲ ನಿನಗಾಗಿ
ನನಗಾಗಿ ನೀನು ಬದುಕಾಗಬೇಡ
ನನ್ನ ರೆಪ್ಪೆಯೊಳಗಿನ ಕನಸಾಗು
ಅಷ್ಟೆ ಸಾಕು ನಾನು ಬದುಕು ಕಟ್ಟುತ್ತೇನೆ

Monday, February 2, 2009

ಈ ಸಾವು ನ್ಯಾಯವೇ?





ಖಂಡಿತಾ ಈ ಲೇಖನ ಓದಿದ ನಂತರ ನಮ್ಮ ವ್ಯವಸ್ಥೆಯ ಬಗ್ಗೆ ಮತ್ತೆ ಪ್ರಶ್ನೆಯೊಂದು ಎದುರಾಗುತ್ತದೆ.ದಯವಿಟ್ಟು ಕ್ಷಮಿಸಿ ನಮ್ಮ ಕೈಯಲ್ಲಿ ಸಾಧ್ಯವಾಗಬಹುದಾದ ಕೆಲಸವನ್ನು ಮಾಡಿದ್ದೇವೆ.ಕೊನೆಯದಾಗಿ ಈ ವಿಷಯವನ್ನು ಹೊರ ಜಗತ್ತಿಗೆ ತಿಳಿಸಿಕೊಡುವ ಮತ್ತೊಂದು ಪ್ರಯತ್ನ ಇಲ್ಲಿದೆ.


ಈ ಸಾವು ನ್ಯಾಯವೇ ಎನ್ನುವ ಮಾತಿನ ಹಿಂದೆ ಸಮಾಧಾನಕ್ಕೆ ನಿಲುಕದ ನೋವಿದೆ.ಸಾವಿನ ಪ್ರಚಾರಕ್ಕೂ ಇಂತಹ ತಾರತಮ್ಯವೇ ಎನ್ನುವ ಪ್ರಶ್ನಾರ್ಥಕ ಚಿಹ್ನೆಯಿದೆ.
ನಿಮಗೆ ನೆನಪಿರಬಹುದು ಹಳೆ ವಿಮಾನ ರಸ್ತೆಯಲ್ಲಿ ಬೈಕ್ ವೀಲಿಂಗ್ ಮಾಡಿ,ಪೋಲೀಸರ ಕಣ್ಣು ತಪ್ಪಿಸಲು ಹೋದ ಮೊಕ್ರಂ ಎನ್ನುವ ಯುವಕ ಸೇನೆಯ ಗುಂಡಿಗೆ ಬಲಿಯಾದಾಗ ಸಿಕ್ಕ ಪ್ರಚಾರ.ರಾಷ್ಟ್ರೀಯ ವಾಹಿನಿಗಳು ಸೇರಿದಂತೆ ಮಾಧ್ಯಮಗಳು ಸಾಕಷ್ಟು ಈ ಬಗ್ಗೆ ಬರೆದಿದ್ದವು.ಇದು ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಹಜ.ಆದರೆ ಅಗಬಾರದ ಅನಾಹುತ ಆಯಿತು ಅಂತ ಬರೆದರಲ್ಲ ಅದು ದುರದೃಷ್ಟ. ಆದರೆ ಇದಕ್ಕೆ ವ್ಯತಿರಿಕ್ತವಾದ ಘಟನೆ ನಡೆದಿದೆ.ಆದರೆ ಸುದ್ದಿಯಾಗಲಿಲ್ಲ.ಸದ್ದೂ ಮಾಡಲಿಲ್ಲ.ಕಂದಮ್ಮಳನ್ನು ಕಳೆದುಕೊಂಡ ಮನಸ್ಸುಗಳು ಮಾತ್ರ ಜೀವನ ಪರ್ಯಂತ ನರಳುವಂತಾಗಿದೆ.

ಆದು ಜನವರಿ ೩೦ರ ಸಂಜೆ.ಬೆಂಗಳೂರಿನ ಗೋವಿಂದರಾಜ ನಗರದ ಮನೆಯೊಂದರಲ್ಲಿ ಸಂಭ್ರಮದ ಸಿದ್ದತೆ ನಡೆಯುತ್ತಿತ್ತು.ಪುಟಾಣಿಯೊಬ್ಬಳ ಹುಟ್ಟು ಹಬ್ಬದ ಸಡಗರಕ್ಕೆ ಬೀದಿ ತಯಾರಾಗಿತ್ತು.ಆದೇ ಹೊತ್ತಿನಲ್ಲಿ ಹುಟ್ಟು ಹಬ್ಬ ಆಚರಿಸಬೇಕಾಗಿದ್ದಚಿತ್ರಾ ಬೀದಿ ಬದಿಯಲ್ಲಿ ಆಡುತ್ತಿದ್ದಳು.ಅದು ಎಲ್ಲಿದ್ದನೋ ಯಮಕಿಂಕರ.ಅದೇ ದಾರಿಯಲ್ಲಿ ಬೈಕ್ ವೀಲಿಂಗ್ ಮಾಡಿಕೊಂಡು ಬಂದ ಪುಣ್ಯಾತ್ಮನೊಬ್ಬ ಚಿತ್ರಾ ಮೇಲೆ ಬೈಕ್ ಹತ್ತಿಸಿದ್ದ.ಕ್ಷಣಾರ್ಧ.ಚಿತ್ರಾಳ ಪ್ರಾಣ ಪಕ್ಷಿ ಹಾರಿ ಹೋಗಿತ್ತು.ಇತ್ತ ಬೈಕ್ ಸವಾರ ಗಾಡಿ ಬಿಟ್ಟು ಪರಾರಿಯಾಗಿದ್ದ.

ಹೊಸ ಬಟ್ಟೆ ಉಟ್ಟು ೯ನೇ ವರ್ಷಕ್ಕೆ ಕಾಲಿಡಬೇಕಾಗಿದ್ದ ಚಿತ್ರಾಳ ಕುಟುಂಬದ ಹಿಂದೆ ನೋವಿನ ಕಥೆಯಿದೆ. ವೃತ್ತಿಯಲ್ಲಿ ಚಿತ್ರಾಳ ತಂದೆ ಬಸವರಾಜು ಮಾಸ್ತರ್, ಅವರಿಗೆ ಒಟ್ಟು ೫ ಜನ ಮಕ್ಕಳು. ಈಗಾಗಲೇ ೪ ಮಕ್ಕಳನ್ನು ಬಸವರಾಜು ಕಳೆದುಕೊಂಡಿದ್ದರು. ಕೊನೆಯ ಪುಟಾಣಿ ಚಿತ್ರಾಳನ್ನು ಇನ್ನಿಲ್ಲದ ಪ್ರೀತಿಯಿಂದ ಬೆಳೆಸಿದ್ದರು. ಬೀದಿ ಮಂದಿಗೂ ಅಷ್ಟೇ.. ಚಿತ್ರಾಳೆಂದರೆ ಅಚ್ಚು ಮೆಚ್ಚು.ಆದರೆ ಈಗ ಎಲ್ಲವೂ ನೆನಪು.ವೀಲಿಂಗ್ ಎಂಬ ಹುಚ್ಚು ಸಾಹಸಕ್ಕೆ ಯಾವುದೇ ತಪ್ಪು ಮಾಡದ ಚಿತ್ರ ಬಲಿಯಾಗಿದ್ದಾಳೆ.
ಇಂಥ ಸಾವಿನ ಕಥೆಗೆ ಸಿಗಬೇಕಾಗಿದ್ದ ಪ್ರಚಾರ ಸಿಗಲಿಲ್ಲ.ಮಂಗಳೂರಿನ ಪಬ್ ದಾಳಿಯ ಸುದ್ದಿಯಲ್ಲಿ ಚಿತ್ರ ತೇಲಿ ಹೋಗಿದ್ದಾಳೆ.ಇದು ವಿಜಯನಗರ ಟ್ರಾಫಿಕ್ ಪೋಲಿಸರಿಗೂ ಅನುಕೂಲವಾಗಿದೆ.ಬೈಕ್ ಬಿಟ್ಟು ಹೋದ ಯುವಕ ಪತ್ತೆಗೆ ಪೋಲಿಸರು ಇನ್ನೂ ಮೀನಾ ಮೇಷ ಎಣಿಸುತ್ತಿದ್ದಾರೆ. ಅದಕ್ಕೆ ಈ ಸಾವು ನ್ಯಾಯವೇ................

ಕೆಳಗಡೆ ಸಂಚಾರ ವಿಭಾಗದ ಪೊಲೀಸ್ ಆಯುಕ್ತರ ಈ ಮೈಲ್ ಇದೆ. ಈ ಪ್ರಕರಣ ಸಂಬಂಧ ಆರೋಪಿಯ ಶೀಘ್ರ ಬಂಧಿಸುವಂತೆ ಒಂದು ಮೇಲ್ ಕಳುಹಿಸಿ ಅಮೇಲೆ ನೋಡೋಣ ನಮ್ಮ ಪೊಲೀಸರ ಕಾರ್ಯ ವೈಖರಿ.
addlcptrafficbcp@gmail.com

Friday, January 16, 2009

ಹೊತ್ತಲ್ಲದ ಹೊತ್ತಿನಲ್ಲಿ.......... ಅನಂತ ನಮನ



ತುಂಬಾ ದಿನಗಳಿಂದ ನಾನು ಬರೆಯಬೇಕು ಅಂದುಕೊಂಡದ್ದು ಬೇರೆ ವಿಷಯ.ಆದರೆ ಹೀಗೆ ನನ್ನ ಲೇಖನ ಹಾದಿ ಬದಲಾಗುತ್ತದೆ ಅಂದುಕೊಂಡಿರಲಿಲ್ಲ.ತಿಂಗಳು ಕಳೆದು ಹೋಗಿದೆ ಬರೆಯಬೇಕು ಅನ್ನುವ ತುಡಿತಕ್ಕೆ.ಬರೆಯಬೇಕು ಅಂದುಕೊಂಡಗಾಲೆಲ್ಲ ಸಾವಿರ ಅಡ್ಡಿಗಳು.ಹಿಂದೆ ಶ್ರೀನಿಧಿ ಕಾಡುತ್ತಿದ್ದ.ಈಗ ಅವನಿಗೂ ಅರ್ಥವಾಗಿದೆ.ಹೀಗಾಗಿ ವಾರಕ್ಕೊಂದು ಪೋಸ್ಟ್ ಮಾಡಲೇಬೇಕು ಅಂತ ನಿರ್ಧರಿಸಿದ್ದೇನೆ.

ಬರೆಯಬೇಕು ಅಂತ ಅಂದುಕೊಂಡಿದ್ದ ಲೇಖನ ಈಗ outdated ಆಗಿದೆ.ಹಾಗಾಗಿ ಹಳೆಯ ನೆನಪುಗಳನ್ನು ಕೆದಕಿದಷ್ಟೆ ನೋವಾಗುತ್ತಿದೆ.
ಬೆಳಗಾವಿ ಅಧಿವೇಶನ,ಸಾಹಿತ್ಯ ಸಮ್ಮೇಳನದ ಸಿದ್ದತೆ.ಇದು ಒಂದು ಕಡೆಯಾದರೆ.ಮತ್ತೊಂದು ಕಡೆ ರಾಜು ಅನಂತಸ್ವಾಮಿ ಇನಿಲ್ಲ.ಹೀಗೆ ನೆನಪುಗಳ ಬುತ್ತಿ ಸಾಗುತ್ತದೆ. ನಾವೆಲ್ಲ ಭಾವಗೀತೆ ಅಂದರೆ ಭಾವಪರವಶರಾಗುತ್ತೇವೆ.ಆದರೆ ಇನ್ನು ಮುಂದೆ ಬರೀ ನೆನಪುಗಳ ಮುಂದೆ ಪರವಶರಾಗಬೇಕಾಗಿದೆ.ವಿಧಿ ಎಷ್ಟೊಂದು ಕ್ರೂರಿ ಅನ್ನಿಸಿಬುಡುತ್ತೆ.ಜಿ.ವಿ. ಅತ್ರಿಯಂತೆ ಇದೀಗ ರಾಜು ಹೊತ್ತಲ್ಲದ ಹೊತ್ತಿನಲ್ಲಿ ಅಗಲಿದ್ದಾರೆ.ಏನಾಗಿದೆ ಇವರಿಗೆಲ್ಲ ಅನ್ನಿಸಿಬಿಡುತ್ತೆ.ಹೌದು ನನ್ನಂತ ಭಾವಗೀತೆ ಪ್ರೀಯರಿಗಂತು ರಾಜು ಅನಂತಸ್ವಾಮಿ ಇನ್ನಿಲ್ಲ ಅನ್ನುವುದು ನಂಬಲಾಗದ ಸತ್ಯ. ಸುದ್ದಿಯ ಬೆನ್ನು ಬಿದ್ದಿದ್ದ ನನಗೆ ರಾಜು ಅನಂತಸ್ವಾಮಿ ಹೀಗೆ ಸುದ್ದಿಯಾಗುತ್ತಾರೆ ಅಂದುಕೊಂಡಿರಲಿಲ್ಲ. ಯಾವ ಮೋಹನ ಮುರಳಿ ಕರೆಯಿತೋ..... ದೂರ ತೀರಕೆ ನಿನ್ನನ್ನು..........ಜಿ.ಪಿ.ರಾಜರತ್ನಂ ಅವರ ರತ್ನನ ಪದಗಳನ್ನು ಹಾಡುವ ಮೂಲಕ ಕನ್ನಡದ ಮನೆ ಮನಗಳಲ್ಲಿ ಮಾತಾಗಿದ್ದರು.ಹೀಗೆ ರಾಜು ಬಗ್ಗೆ ಹೇಳುತ್ತ ಹೋದರೆ ಸಾವಿರ ಪುಟಗಳು.

ಒಂದು ನಿಟ್ಟನಲ್ಲಿ ರಾಜು ಬಹುಮುಖ ಪ್ರತಿಭೆಯಾಗಿದ್ದ.ಭಾವಗೀತೆ ಲೋಕದ ಮಾಂತ್ರಿಕನಲ್ಲದೆ...ಚಲನಚಿತ್ರಗಳಿಗೆ ಸಂಗೀತ ನಿರ್ದೇಶನಾಗಿದ್ದ.ಒಳ್ಳೆಯ ನಟನಾಗಿದ್ದ. ಮಂಡ್ಯ ರಮೇಶನ ನಟನ ಶಾಲೆಯಲ್ಲಿ ಸಂಗೀತ ಗುರುವಾಗಿ, ಹಲವು ಚಿತ್ರಗಳಲ್ಲಿ ಹಾಸ್ಯ ನಟರಾಗಿಗೂ ರಾಜು ಅನಂತಸ್ವಾಮಿ ನಟಿಸಿದ್ದ.ಪುನೀತ್ ನ 'ಅಭಿ' ಚಿತ್ರದಲ್ಲಿನ ನಟನೆಗಾಗಿ ಉತ್ತಮ ಹಾಸ್ಯ ನಟ ಪ್ರಶಸ್ತಿ ರಾಜು ಪಾಲಾಗಿತ್ತು.ಜೊತೆಗೆ ನಾಗತಿಹಳ್ಳಿ ನಿರ್ದೇಶನದ 'ಅಮೃತ ಧಾರೆ' ಮತ್ತು ಜಾಕ್ ಪಾಟ್ ಚಿತ್ರಗಳಲ್ಲಿ ನಟನೆ. ಹೂವು,ಅನಂತ ನಮನ,ದೀಪೋತ್ಸವ,ಮುಂತಾದ ಆಲ್ಬಂಗಳನ್ನು ರಾಜು ಅನಂತಸ್ವಾಮಿ ಹೊರ ತರುವಲ್ಲಿ ಪಟ್ಟ ಶ್ರಮ ಆಷ್ಟಿಷ್ಟಲ್ಲ.ಈಗ ನೆನಪು ಮಾತ್ರ.ನಮನ ಮಾತ್ರ ನನ್ನ ಕಡೆಯಿಂದ.

Tuesday, December 2, 2008

ನಮನ - ೨

ಬಾಂಬೆಯ ಸುತ್ತ ರಕ್ತದ ರಂಗೋಲಿ. ಈ ನಗರಕ್ಕೆ ಇದೇನು ಶಾಪ ಅಂದುಕೊಳ್ಳಬೇಕಿದೆ. ನಮ್ಮವರು ಬ್ಲಾಕ್ ಕಮಾಂಡೋ, ನೇವಿ ಮಂದಿ, ಅಗ್ನಿ ಶಾಮಕ ದಳ ಹೀಗೆ ಹಲವು ತಂಡಗಳು ತಮ್ಮವರನ್ನು ಮರೆತು ಹೋರಾಡಿದರು. ನಾವು ಮುಂಜಾನೆ ಪೇಪರ್ ನೋಡಿ ಛೇ ಅಂದೆವು, ಟಿ.ವಿ. ನೋಡಿ ಅಯ್ಯೋ ಅಂದೆವು. ನಾವಾದರು ಏನು ಮಾಡಲು ಸಾಧ್ಯ. ಬಹುಶ ಇಂತಹುದೊಂದು ಕೆಲಸ ಮಾಡಿದ ಹಿರಿಮೆ ನಮ್ಮದು.

http://neelanjala.wordpress.com/

ಸಂದೀಪ್ ಅಂತ್ಯ ಸಂಸ್ಕಾರದಲ್ಲಿ ಧರ್ಮವನ್ನು ಭಾಷೆಯನ್ನು ಗುತ್ತಿಗೆ ಪಡೆದಂತೆ ವರ್ತಿಸುವ ಮಂದಿ ಮಾಡಿದ ವರ್ತನೆ ಮಾತ್ರ ದುರಾದೃಷ್ಟ. ನೀವು ನೋಡಿದ್ದರೆ ನೆನಪಿಸಿಕೊಳ್ಳಿ. ಎಲ್ಲರ ಕಣ್ಣಂಚು ತೇವಗೊಂಡಿತ್ತು. ಭಾರತ ಬಾವುಟ ಹೋರಾಟದ ಕಥೆಗಳನ್ನು ಸಾರಿ ಹೇಳುತ್ತಿತ್ತು. ಆದರೆ ರಕ್ಷಣಾ ವೇದಿಕೆಯ ಮಂದಿ ಕನ್ನಡ ಬಾವುಟವನ್ನು ತ್ರಿವರ್ಣ ಧ್ವಜಕ್ಕಿಂತಲ್ಲೂ ಎತ್ತರಕ್ಕೆ ಹಾರಿಸಿದರು. ತಪ್ಪು ಅಂದವರಿಗೆ ಇದು ಕರ್ನಾಟಕ ಎಂದರು... ಸಂದೀಪ್ ಹೋರಾಡಿದ್ದು ಭಾರತಕ್ಕೆ ಏನ್ನುವುದನ್ನು ಮರೆತರು. ಇನ್ನು ಹಿಂದು ಪರ ಸಂಘಟನೆಗಳು ತಮ್ಮ ಭಗವಾ ಧ್ವಜವನ್ನು ಹೊತ್ತು ತಿರುಗಾಡಿದರು. ಇದು ನಾವು ನೀಡಿದ ಸಲಾಂ.( ತಪ್ಪೇನಿದೆ ಕೇರಳ ಮುಖ್ಯಮಂತ್ರಿಗೆ ಅವಮಾನ ಮಾಡಿದ್ದರಲ್ಲಿ.)

ಇನ್ನು ರಾಜಕಾರಣಿಗಳು ಬಾಯಿ ಬಿಚ್ಚಿದರೆ ಕೋಟಿ ಅಂದರು.ಅದಕ್ಕೆ ಇರಬೇಕು ನಮ್ಮ ಡಿ.ಜಿ. ಸಾಹೇಬರು ಅವಧಿ ಮುಗಿದ ಶಸ್ತ್ರಾಸ್ತ್ರ ಗಳನ್ನು ಪ್ರದರ್ಶಿಸಿದ್ದು.ಒಟ್ಟಾರೆ ಧರ್ಮದ ಆಫೀಮು ಎಲ್ಲವನ್ನು ಕತ್ತಲಾಗಿಸಿದೆ. ನಿನ್ನೆ ಮುಂಬೈ.... ನಾಳೆ ಬೆಂಗಳೂರು ಇರಬಹುದು... ಜವಾಬ್ದಾರಿ ಯಾರು.?

Saturday, November 29, 2008

ನಮನ........

ಪ್ರತೀ ಕ್ಷಣ ಆತಂಕ.... ಎಲ್ಲ ಮುಗಿದಿದೆ ಈಗ ಉಳಿದಿರುವುದು ನೋವು... ನೆನಪು ಅಳಿಯದಿರಲಿ

ಸೆಲ್ಯೂಟ್ to brothers..... ಸುದ್ದಿಗಾಗಿ ಪಟ್ಟ ಪಾಡು, ಹೋರಾಟದ ಅಂತಿಮ ಕ್ಷಣ..... ಇಲ್ಲಿದೆ













Saturday, November 8, 2008

ಮೌನಗಳು

ಮೌನ ೧

ಯಾಕೆ ಕಾಡುತ್ತೀಯ ಹೀಗೆ
ಮಾತಿನಲ್ಲಿ ಮೌನದಲ್ಲಿ
ಜಿಟಿ ಜಿಟಿ ಮಳೆಯಲ್ಲೂ
ನಿನ್ನದೇ ನೆನಪು
ನಿನ್ನ ಮೌನ ರೂಪ
ನನ್ನ ಮೌನವನ್ನು ಹೇಗೆ ಕಾಡುತ್ತಿದೆ

ಮೌನ ೨

ಮೌನವಾಗಿರುವ ಹುಡುಗಿ
ಮೌನದೊಳಗೆ ಕಾಡುತ್ತಾಳೆ
ತುಟಿ ಬಿಚ್ಚದ ಹುಡುಗಿ
ಮೌನದಲ್ಲಿ ಮುಗುಳು ನಗುತ್ತಾಳೆ
ಮಲ್ಲಿಗೆಯಂತ ಮೌನ
ತಾವರೆಯಂತಹ ನಗು
ಅರ್ಥವಾಗುವುದೇ ಇಲ್ಲ.

ಮೌನ ೩
ಅಮ್ಮ ಬಿಡಲಿಲ್ಲ
ಅಪ್ಪ ಮೌನ ಒಡೆಯಲಿಲ್ಲ
ಒಡೆದದ್ದು ಹೃದಯಗಳು
ಮನಗಳು