Tuesday, June 10, 2008

ರೈತ -- ರಕ್ತ ತರ್ಪಣ

ನಾನು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ದಿನಗಳು ರೈತ ದೇಶದ ಬೆನ್ನೆಲುಬು ಎಂದು ನಮ್ಮ ಟೀಚರ್ ಕಂಠ ಪಾಠ ಮಾಡಿಸುತ್ತಿದ್ದರೂ,ಆದರೆ ಅಮೇಲಿನ ದಿನಗಳಲ್ಲಿ ಆರಿವಾಗತೊಡಗಿತು....ಬೆನ್ನೆಲುಬನ್ನು ಮುರಿಯುವ ಕೆಲಸ ಸತತವಾಗಿ ನಡೆಯುತ್ತಿದೆ ಎಂದು.ಹಾವೇರಿಯಲ್ಲೂ ನಡೆದದ್ದು ಇದೇ.ರಾಜ್ಯ ಪ್ರತೀ ಬಾರಿಯೂ ಒಂದಲ್ಲ ಒಂದು ಸಮಸ್ಯೆ ಸಿಲುಕಿ ತತ್ತರಿಸುತ್ತಿದೆ. ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮಂದಿಗೆ ಇದರ ಅರಿವು ಇರಬೇಕಾಗಿತ್ತು. ಆದರೆ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಭಣಗೊಳ್ಳುತ್ತಿದ್ರೂ ಇವರಿಗೆ ಚಿಂತೆ ಇದದ್ದು ಅಧಿಕಾರಿಗಳ ವರ್ಗಾವಣೆ ಬಗ್ಗೆ. ಇದರ ಪ್ರತಿಫಲ ಗೊಬ್ಬರ-ಬೀಜಕ್ಕಾಗಿ ರೈತನ ರಕ್ತ ತರ್ಪಣ.

ರಾಜ್ಯದಲ್ಲಿ ರೈತನ ಸಮಸ್ಯೆ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೇ ಪ್ರಾರಂಭಗೊಂಡಿತ್ತು. ಬೀಜ, ಗೊಬ್ಬರಕ್ಕಾಗಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತ್ತು.ಆದರೆ ರಾಜಧಾನಿಯಲ್ಲಿ ಕೇವಲ ಭರವಸೆಯ ಮಹಾನದಿ ಹರಿದಿತ್ತು ಬಿಟ್ಟರೆ, ಆಡಳಿತದ ಚುಕ್ಕಾಣಿ ಹಿಡಿದ ಮಂದಿ ಈ ಭಾಗಕ್ಕೆ ಭೇಟಿ ನೀಡುವ ಕೆಲಸವನ್ನು ಮಾಡಿರಲಿಲ್ಲ. ಈಗ ಎಲ್ಲವೂ ಕೈ ಮೀರಿದೆ. ರಾಜ್ಯದಲ್ಲಿ ಹೋರಾಟ ಕೆಂಪಾಗಿದೆ. ಹಸಿರು ಶಾಲಿನ ಮೇಲಿನ ಕೆಂಪು ಕಲೆಗಳಾಗಿದೆ.

ಮಾಧ್ಯಮಗಳು ಸಮಸ್ಯೆಯ ಸ್ವರೂಪವನ್ನು ಗಂಟೆಗಟ್ಟಲೆ ತೋರಿಸಿದವು, ಪುಟಗಟ್ಟಲೆ ಬರೆದವು ಆದರೂ ರೈತರ ಆಕ್ರೋಶವನ್ನು ಶಮನಗೊಳಿಸುವಲ್ಲಿ ಸರ್ಕಾರ ವಿಫಲವಾಗಿದೆ. ಇದೀಗ ರಾಜಭವನದತ್ತ ವಿಧಾನಸೌಧ ಕೈತೋರಿಸುತ್ತಿದೆ. ತಪ್ಪುಗಳು ನಡೆದದ್ದು ಇಲ್ಲೆ ಎನ್ನುವುದು ಇದರ ಒಳಾರ್ಥ. ಆದರೆ ರಾಜ್ಯಪಾಲರಿಗೆ ಕನ್ನಡದ ನೆಲದ ಸಮಸ್ಯೆಯ ಅರಿವಿಲ್ಲ ಸರಿ, ಅಧಿಕಾರಿಗಳು ಏನು ಮಾಡುತ್ತಿದ್ದರು. ಇವರ ತಪ್ಪುಗಳಿಗೆ ಶಿಕ್ಷೆಯೇನು? ಸರಿ ಬಿಟ್ಟು ಬಿಡಿ. ಸಮಸ್ಯೆ ತೀವ್ರ ಸ್ವರೂಪ ಪಡೆದು, ಪೋಲಿಸರು ಪರಿಸ್ಥಿತಿ ನಿಯಂತ್ರಣಕ್ಕೆ ಒದ್ದಾಡುತ್ತಿದ್ದರೆ ಮಾನ್ಯ ಗೃಹ ಸಚಿವರು ತಮ್ಮ ತವರೂರಿನಲ್ಲಿ ಮಾಡುತ್ತಿದ್ದದರೂ ಏನು?

ಈಗ ರೈತರ ಹೆಸರಿನಲ್ಲಿ ರಾಜಕೀಯ ಆರೋಪ ಪ್ರತ್ಯಾರೋಪಗಳು ಪ್ರಾರಂಭಗೊಂಡಿದೆ. ಮುಂದೇನು ಅನ್ನುವ ಪ್ರಶ್ನೆಗೆ ಉತ್ತರವಿಲ್ಲ.

ಈ ನಡುವೆ ಬಹುಮುಖ್ಯ ಪ್ರಶ್ನೆಯೊಂದು ಎಲ್ಲರನ್ನೂ ಕಾಡುತ್ತಿದೆ. ಹಾವೇರಿಯಲ್ಲಿ ಗೋಲಿಬಾರ್ ಅಗತ್ಯವಿತ್ತೆ ?