ಖಂಡಿತಾ ಈ ಲೇಖನ ಓದಿದ ನಂತರ ನಮ್ಮ ವ್ಯವಸ್ಥೆಯ ಬಗ್ಗೆ ಮತ್ತೆ ಪ್ರಶ್ನೆಯೊಂದು ಎದುರಾಗುತ್ತದೆ.ದಯವಿಟ್ಟು ಕ್ಷಮಿಸಿ ನಮ್ಮ ಕೈಯಲ್ಲಿ ಸಾಧ್ಯವಾಗಬಹುದಾದ ಕೆಲಸವನ್ನು ಮಾಡಿದ್ದೇವೆ.ಕೊನೆಯದಾಗಿ ಈ ವಿಷಯವನ್ನು ಹೊರ ಜಗತ್ತಿಗೆ ತಿಳಿಸಿಕೊಡುವ ಮತ್ತೊಂದು ಪ್ರಯತ್ನ ಇಲ್ಲಿದೆ.
ಈ ಸಾವು ನ್ಯಾಯವೇ ಎನ್ನುವ ಮಾತಿನ ಹಿಂದೆ ಸಮಾಧಾನಕ್ಕೆ ನಿಲುಕದ ನೋವಿದೆ.ಸಾವಿನ ಪ್ರಚಾರಕ್ಕೂ ಇಂತಹ ತಾರತಮ್ಯವೇ ಎನ್ನುವ ಪ್ರಶ್ನಾರ್ಥಕ ಚಿಹ್ನೆಯಿದೆ.
ನಿಮಗೆ ನೆನಪಿರಬಹುದು ಹಳೆ ವಿಮಾನ ರಸ್ತೆಯಲ್ಲಿ ಬೈಕ್ ವೀಲಿಂಗ್ ಮಾಡಿ,ಪೋಲೀಸರ ಕಣ್ಣು ತಪ್ಪಿಸಲು ಹೋದ ಮೊಕ್ರಂ ಎನ್ನುವ ಯುವಕ ಸೇನೆಯ ಗುಂಡಿಗೆ ಬಲಿಯಾದಾಗ ಸಿಕ್ಕ ಪ್ರಚಾರ.ರಾಷ್ಟ್ರೀಯ ವಾಹಿನಿಗಳು ಸೇರಿದಂತೆ ಮಾಧ್ಯಮಗಳು ಸಾಕಷ್ಟು ಈ ಬಗ್ಗೆ ಬರೆದಿದ್ದವು.ಇದು ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಹಜ.ಆದರೆ ಅಗಬಾರದ ಅನಾಹುತ ಆಯಿತು ಅಂತ ಬರೆದರಲ್ಲ ಅದು ದುರದೃಷ್ಟ. ಆದರೆ ಇದಕ್ಕೆ ವ್ಯತಿರಿಕ್ತವಾದ ಘಟನೆ ನಡೆದಿದೆ.ಆದರೆ ಸುದ್ದಿಯಾಗಲಿಲ್ಲ.ಸದ್ದೂ ಮಾಡಲಿಲ್ಲ.ಕಂದಮ್ಮಳನ್ನು ಕಳೆದುಕೊಂಡ ಮನಸ್ಸುಗಳು ಮಾತ್ರ ಜೀವನ ಪರ್ಯಂತ ನರಳುವಂತಾಗಿದೆ.
ಆದು ಜನವರಿ ೩೦ರ ಸಂಜೆ.ಬೆಂಗಳೂರಿನ ಗೋವಿಂದರಾಜ ನಗರದ ಮನೆಯೊಂದರಲ್ಲಿ ಸಂಭ್ರಮದ ಸಿದ್ದತೆ ನಡೆಯುತ್ತಿತ್ತು.ಪುಟಾಣಿಯೊಬ್ಬಳ ಹುಟ್ಟು ಹಬ್ಬದ ಸಡಗರಕ್ಕೆ ಬೀದಿ ತಯಾರಾಗಿತ್ತು.ಆದೇ ಹೊತ್ತಿನಲ್ಲಿ ಹುಟ್ಟು ಹಬ್ಬ ಆಚರಿಸಬೇಕಾಗಿದ್ದಚಿತ್ರಾ ಬೀದಿ ಬದಿಯಲ್ಲಿ ಆಡುತ್ತಿದ್ದಳು.ಅದು ಎಲ್ಲಿದ್ದನೋ ಯಮಕಿಂಕರ.ಅದೇ ದಾರಿಯಲ್ಲಿ ಬೈಕ್ ವೀಲಿಂಗ್ ಮಾಡಿಕೊಂಡು ಬಂದ ಪುಣ್ಯಾತ್ಮನೊಬ್ಬ ಚಿತ್ರಾ ಮೇಲೆ ಬೈಕ್ ಹತ್ತಿಸಿದ್ದ.ಕ್ಷಣಾರ್ಧ.ಚಿತ್ರಾಳ ಪ್ರಾಣ ಪಕ್ಷಿ ಹಾರಿ ಹೋಗಿತ್ತು.ಇತ್ತ ಬೈಕ್ ಸವಾರ ಗಾಡಿ ಬಿಟ್ಟು ಪರಾರಿಯಾಗಿದ್ದ.
ಹೊಸ ಬಟ್ಟೆ ಉಟ್ಟು ೯ನೇ ವರ್ಷಕ್ಕೆ ಕಾಲಿಡಬೇಕಾಗಿದ್ದ ಚಿತ್ರಾಳ ಕುಟುಂಬದ ಹಿಂದೆ ನೋವಿನ ಕಥೆಯಿದೆ. ವೃತ್ತಿಯಲ್ಲಿ ಚಿತ್ರಾಳ ತಂದೆ ಬಸವರಾಜು ಮಾಸ್ತರ್, ಅವರಿಗೆ ಒಟ್ಟು ೫ ಜನ ಮಕ್ಕಳು. ಈಗಾಗಲೇ ೪ ಮಕ್ಕಳನ್ನು ಬಸವರಾಜು ಕಳೆದುಕೊಂಡಿದ್ದರು. ಕೊನೆಯ ಪುಟಾಣಿ ಚಿತ್ರಾಳನ್ನು ಇನ್ನಿಲ್ಲದ ಪ್ರೀತಿಯಿಂದ ಬೆಳೆಸಿದ್ದರು. ಬೀದಿ ಮಂದಿಗೂ ಅಷ್ಟೇ.. ಚಿತ್ರಾಳೆಂದರೆ ಅಚ್ಚು ಮೆಚ್ಚು.ಆದರೆ ಈಗ ಎಲ್ಲವೂ ನೆನಪು.ವೀಲಿಂಗ್ ಎಂಬ ಹುಚ್ಚು ಸಾಹಸಕ್ಕೆ ಯಾವುದೇ ತಪ್ಪು ಮಾಡದ ಚಿತ್ರ ಬಲಿಯಾಗಿದ್ದಾಳೆ.
ಇಂಥ ಸಾವಿನ ಕಥೆಗೆ ಸಿಗಬೇಕಾಗಿದ್ದ ಪ್ರಚಾರ ಸಿಗಲಿಲ್ಲ.ಮಂಗಳೂರಿನ ಪಬ್ ದಾಳಿಯ ಸುದ್ದಿಯಲ್ಲಿ ಚಿತ್ರ ತೇಲಿ ಹೋಗಿದ್ದಾಳೆ.ಇದು ವಿಜಯನಗರ ಟ್ರಾಫಿಕ್ ಪೋಲಿಸರಿಗೂ ಅನುಕೂಲವಾಗಿದೆ.ಬೈಕ್ ಬಿಟ್ಟು ಹೋದ ಯುವಕ ಪತ್ತೆಗೆ ಪೋಲಿಸರು ಇನ್ನೂ ಮೀನಾ ಮೇಷ ಎಣಿಸುತ್ತಿದ್ದಾರೆ. ಅದಕ್ಕೆ ಈ ಸಾವು ನ್ಯಾಯವೇ................
ಕೆಳಗಡೆ ಸಂಚಾರ ವಿಭಾಗದ ಪೊಲೀಸ್ ಆಯುಕ್ತರ ಈ ಮೈಲ್ ಇದೆ. ಈ ಪ್ರಕರಣ ಸಂಬಂಧ ಆರೋಪಿಯ ಶೀಘ್ರ ಬಂಧಿಸುವಂತೆ ಒಂದು ಮೇಲ್ ಕಳುಹಿಸಿ ಅಮೇಲೆ ನೋಡೋಣ ನಮ್ಮ ಪೊಲೀಸರ ಕಾರ್ಯ ವೈಖರಿ.
addlcptrafficbcp@gmail.com